ಕುಟುಕುಕಣವಂತಗಳು

ಅಂಬಲಿ ಮೀನು, ಹೈಡ್ರ, ಗಾರ್ಗೋನಿಯ (ಕಡಲ ಬೀಸಣಿಗೆ) ಪೆರಿಫಿಲ್, ಪೋರ್ಚುಗೀಸ್ ಯುದ್ಧಪೋತ (ಪೋರ್ಚುಗೀಸ್ ಮ್ಯಾನ್ ಆಫ್ ವಾರ್ ಫೈಸೇಲಿಯ) ಕಡಲ ಹೂ (ಸೀ ಆನಿಮೋನೆ) ಹುಳು ಮುಂತಾದವನ್ನೊಳಗೊಂಡ ಒಂದು ಅಕಶೇರುಕಪ್ರಾಣಿ ವಂಶ. ಈ ವಂಶಕ್ಕೆ ಕೊಟ್ಟಿರುವ ಸೀಲೆಂಟರೇಟ ಎಂಬ ಗ್ರೀಕ್ ಹೆಸರು. ಆ ಪ್ರಾಣಿಗಳಲ್ಲಿ ಜಠರಾವಕಾಶದ ಸುತ್ತ ಅವುಗಳ ದೇಹ ವ್ಯವಸ್ಥೆಯಾಗಿರುವುದೆಂಬುದನ್ನು ಸೂಚಿಸುತ್ತದೆ. ಮೊದ ಮೊದಲು ಈ ವಂಶದಲ್ಲಿ ಸ್ಪಂಜುಗಳನ್ನು ಕೋಮ್‍ಜೆಲ್ಲಿಗಳನ್ನೂ ಸೇರಿಸಾಗುತ್ತಿತ್ತು. ಈಚೆಗೆ ಅವನ್ನು ಬೇರೆಬೇರೆ ವಂಶಗಳಾಗಿ ವಿಂಗಡಿಸಿರುವುದರಿಂದ ಕುಟುಕುಕಣವಂತಗಳನ್ನು ಮಾತ್ರ ಒಳಗೊಂಡ ವಂಶವನ್ನು ಸೂಚಿಸಲು ನೈಡೇರಿಯ ಎಂಬ ಹೆಸರನ್ನೂ ಬಳಸುವುದುಂಟು. ಸೂಕ್ಷ್ಮವೇದಿಯೂ ಬಳುಕುವ ರಚನೆಯವೂ ಆದ ಟೆಂಟಕಲ್ ಎಂಬ ಸ್ಪರ್ಶತಂತುಗಳೂ, ಬಾಹ್ಯಚರ್ಮದಲ್ಲಿ ಕುಟುಕುಕಣಗಳೂ (ನಿಮ್ಯಾಟೊಸಿಸ್ಟ್) ಇರುವುದು, ಈ ವಂಶದ ಪ್ರಾಣಿಗಳ ವಿಶಿಷ್ಟ ಲಕ್ಷಣಗಳು. ದೇಹ ಸಾಮಾನ್ಯವಾಗಿ ತ್ರಿಜ್ಯ ಸಮ್ಮಿತಿಯನ್ನು (ರೇಡಿಯಲ್ ಸಿಮೆಟ್ರಿ) ಪ್ರದರ್ಶಿಸುತ್ತದೆ. ಕೆಲವು ಪ್ರಾಣಿಗಳಲ್ಲಿ ದ್ವಿಪಾಶ್ರ್ವಸಮ್ಮಿತಿ (ಬೈಲ್ಯಾಟರಲ್ ಸಿಮೆಟ್ರಿ) ಕಂಡುಬರುತ್ತದೆ. ಗಾತ್ರದಲ್ಲಿ 1/25" ದಷ್ಟು ಸಣ್ಣದಾದ ಪಾಲಿಪ್‍ಗಳಿಂದ ಹಿಡಿದು ಮೂರಡಿ ವ್ಯಾಸವುಳ್ಳ ಪಾಲಿಪ್‍ಗಳ ವರೆಗೂ ಇರುವುದುಂಟು. ಹಾಗೆಯೆ, ಅಷ್ಟಾಗಿ ಕಣ್ಣಿಗೆ ಬೀಳದ ಬಹು ಸಣ್ಣ ಅಂಬಲಿಮೀನುಗಳಿಂದ ಹಿಡಿದು ಆರಡಿ ವ್ಯಾಸದ ದೈತ್ಯಾಕಾರದ ಅಂಬಲಿ ಮೀನುಗಳವರೆಗೂ ಇರುವುದುಂಟು.

ಪರ್ಯಾಯ ಸಂತತಿ ಕ್ರಮ:  ಬಹುತೇಕ ಪ್ರಾಣಿಗಳ ಜೀವನಚರಿತ್ರೆಯಲ್ಲಿ ಪಾಲಿಪ್ ಮತ್ತು ಮೆಡೂಸ ಎಂಬ ಎರಡು ಅವಸ್ಥೆಗಳು ಪರ್ಯಾಯವಾಗಿ ಬರುವುದು ಕುಟುಕುಕಣವಂತಗಳ ಮತ್ತೊಂದು ಲಕ್ಷಣ. ಪಾಲಿಪ್‍ರೂಪ ವಸ್ತುವೊಂದಕ್ಕೆ ಅಂಟಿಕೊಂಡು ನೆಟ್ಟಗೆ ಓಲಾಡುತ್ತಿರುತ್ತದೆ. ಅದರ ತುದಿಯಲ್ಲಿ ಬಾಯಿಯೂ, ಬಾಯಿಯ ಸುತ್ತ ಸ್ಪರ್ಶತಂತುಗಳೂ ಇರುತ್ತವೆ. ಇದು ಆ ಪ್ರಾಣಿಯ ಸ್ಥಾವರರೂಪ ಮೆಡೂಸ ಆ ಪ್ರಾಣಿಯ ಚಲಿಸುವ ರೂಪ ಸಾಮಾನ್ಯವಾಗಿ ಇದನ್ನು ಅಂಬಲಿ ಮೀನು (ಜೆಲ್ಲಿ ಫಿಷ್) ಎಂದು ಕರೆಯುವರು. ಅದರ ಕೊಡೆಯಾಕೃತಿಯ ದೇಹವನ್ನು ಗಂಟೆ (ಬೆಲ್) ಎಂದು ಕರೆಯುವುರು. ಅದರ ಮೇಲ್ಗವಡೆಯ ಮಧ್ಯದಿಂದ ದೇಹದೊಳಕ್ಕೆ ಇಳಿಯುವ ಮೆನೂಬ್ರಿಯಂ ಎಂಬ ನಾಳವಿದೆ. ಆ ನಾಳದ ತುದಿಯಲ್ಲಿ ಬಾಯಿಯಿದೆ. ಗಂಟೆಯ ಸುತ್ತಣ ಅಂಚಿನಲ್ಲಿ ಸ್ಪರ್ಶತಂತುಗಳಿವೆ. (ಟೆಂಟಕಲ್ಸ್) ಈ ವಂಶದ ಹೈಡೋಜೋóವ ಮತ್ತು ಸ್ಕೈಫೋಜೋóವ ಎಂಬ ಎರಡು ವರ್ಗಗಳ ಕುಟುಕುಕಣವಂತಗಳಲ್ಲಿ ಲಿಂಗರೀತಿಯ ವಂಶಾಭಿವೃದ್ದಿಯಿಂದ ಪ್ಲಾನುಲ ಎಂಬ ಲಾರ್ವ ಉದ್ಭವಿಸುತ್ತದೆ. ಇದು ಯಾವುದಾದದರೂ ವಸ್ತುವಿಗೆ ಕಚ್ಚಿಕೊಂಡು ವೃದ್ಧಿಯಾಗಿ ಪಾಲಿಪ್ ರೂಪವನ್ನು ತಾಳುತ್ತದೆ. ಇದು ಏಕಾಂಗಿಯಾಗಿ ಉಳಿಯಬಹುದು ಅಥವಾ ಆಲಿಂಗರೀತಿಯಿಂದ ಕವಲೊಡೆದ ಆ ಮೂಲಕ ವಂಶಾಭಿವೃದ್ದಿಮಾಡಿ ಸಾಂಘಿಕ ಸ್ವರೂಪವನ್ನು ತಾಳಬಹುದು. ಸ್ಥಾವರ ಜೀವನವನ್ನು ನಡೆಸುವ ಪಾಲಿಪ್ ಆ ಪ್ರಾಣಿಯ ಕಿಶೋರಾವಸ್ಥೆ ಮಾತ್ರ. ಕೊನೆಗೆ ಅದು ಅಲಿಂಗರೀತಿಯಿಂದ ಮೊಗ್ಗೊಡೆದು ಮೆಡೂಸಗಳನ್ನು ಉತ್ಪತ್ತಿಮಾಡುತ್ತದೆ. ಅವು ನೀರಿನಲ್ಲಿ ಚಲಿಸುತ್ತ ಬೆಳೆದು ಲೈಂಗಿಕವಾಗಿ ಪ್ರೌಢಾವಸ್ಥೆಗೇರುತ್ತವೆ. ಎಂದರೆ, ಕುಟುಕು ಕಣವಂತಗಳ ಜೀವನ ಚರಿತ್ರೆಯಲ್ಲಿ ವಂಶಾಭಿವೃದ್ಧಿ ಮಾಡುವ ಪಾಲಿಪ್ ರೂಪವೂ ಅನಂತರ ಅದರಿಂದ ಲಿಂಗರೀತಿಯಲ್ಲಿ ಸಂತಾನೋತ್ಪತ್ತಿ ಮಾಡುವ ಮೆಡೂಸ ರೂಪವೂ ಬರುವುದರಿಂದ ಇಲ್ಲಿ ಪರ್ಯಾಯ ಸಂತಾನೋತ್ಪತ್ತಿ (ಅಲ್ಪರ್ನೇಷನ್ ಆಫ್ ಜನರೇಷನ್ಸ್) ಕಂಡುಬರುತ್ತದೆ.

ದೇಹರಚನೆ: ಕುಟುಕುಕಣವಂತಗಳ ದೇಹ ಒಂದೇ ದ್ವಾರವಿರುವ ಕೋಶದಂತಿರುತ್ತದೆ. ಈ ದ್ವಾರವೇ ಬಾಯಿ. ಅದು ಅಹಾರಸೇವನೆಗೂ ಮಲವಿಸರ್ಜನೆಗೂ ಇರುವ ಏಕೈಕ ಮಾರ್ಗ. ಬಾಯಿಯ ಸುತ್ತಲೂ ಸ್ಪರ್ಶತಂತುಗಳಿವೆ. ಇವು ಪ್ರಾಣಿಯ ಆತ್ಮರಕ್ಷಣೆಗೂ ಸ್ವಲ್ಪ ಮಟ್ಟಿಗೆ ಅದರ ಚಲನೆಗೂ ನೆರವಾಗುವ ಅಂಗಗಳು. ಈ ತಂತುಗಳ ಮೇಲಿರುವ ಕುಟುಕು ಕಣಗಳು ಮೊದಲೆರಡು ಕಾರ್ಯಗಳಿಗೆ ನೇರವಾಗಿ ಪಾತ್ರವಹಿಸುತ್ತವೆ. ದೇಹದಲ್ಲಿ ಎರಡು ಪದರದ ಕೋಶಗಳ ಕವಚ ಮಾತ್ರ ಇದೆ. ಹೊರಮೈಯನ್ನು ಆವರಿಸಿರುವ ಹೊರಚರ್ಮದ ವರಿಸೆಯಲ್ಲಿ ಹಲವು ಬಗೆಯ ಕೋಶಗಳಿವೆ. ಕುಟುಕುಕಣಗಳನ್ನು ರೂಪಿಸುವ ನೈಡೋಬ್ಲಾಸ್ಟ್‍ಗಳು, ಸಂವೇದಿ ಕಣಗಳು, ನರಕೋಶಗಳು (ನ್ಯೂರಾನ್ಸ್), ರಸಸ್ರಾವಕ ಕೋಶಗಳು, ಅಂತರಾಳದ ಕೋಶಗಳು (ಇಂಟರ್‍ಸ್ಟಿಷಿಯಲ್ ಸೆಲ್ಸ್), ಹೊರತೊಕ್ಕಿನ ಕೋಶಗಳು ಇವೇ ಮುಂತಾದ ಕಣಗಳನ್ನು ಅದರಲ್ಲಿ ಕಾಣಬಹುದು. ಹೊರತೊಕ್ಕಿನ ಕೋಶಗಳು ರೋಮಗಳನ್ನು (ಸೀಲಿಯ) ತಳೆದಿರಬಹುದು. ಅವುಗಳ ತಳದಲ್ಲಿ ಆಕುಂಚಕ ಕಣಗಳ ಅಥವಾ ಸ್ನಾಯುವಿನ ರಚನೆಗಳಿರುತ್ತವೆ. ದೇಹದ ಒಳಮೈಯನ್ನು ಇನ್ನೊಂದು ವರಿಸೆ ಕಣಗಳು ಆವರಿಸಿರುವ ತೊಕ್ಕಿನಲ್ಲಿರುವಂಥ ವಿವಿಧ ರೀತಿಯ ಕಣಗಳಿರುತ್ತವೆ. ಜಠರಾವಕಾಶವನ್ನು ಆವರಿಸಿರುವ ತೊಕ್ಕು ಜೀರ್ಣಕೋಶಗಳ ವರಿಸೆಯಾಗಿ ಮಾರ್ಪಟ್ಟಿದೆ. ಇವು ಸ್ರವಿಸುವ ಜೀರ್ಣರಸದಲ್ಲಿರುವ ಕಿಣ್ವಕ್ಕೆ ಸಸಾರಜನಕಾದಿವಸ್ತುಗಳನ್ನು (ಪ್ರೋಟಿನ್ಸ್) ವಿಭಜಿಸುವ ಶಕ್ತಿಯಿದೆ. ಅದು ಆಹಾರವನ್ನು ಅಣುರೂಪಕ್ಕೆ ಒಡೆಯುತ್ತದೆ. ಜಠರಾವಕಾಶವನ್ನು ಆವರಿಸಿರುವ ಆ ಕೋಶಗಳು ಅನಂತರ ಅದನ್ನು ಅಂತರ್ಗತಮಾಡಿಕೊಳ್ಳುತ್ತವೆ. ಆಹಾರದ ಅಂತಿಮ ಜೀರ್ಣಕಾರ್ಯವೂ ಆ ಕೋಶಗಳೊಳಗೇ ನಡೆಯುತ್ತದೆ. ಹಾಗೆ ಜೀರ್ಣವಾದ ಪೋಷಾಕಾಂಶಗಳು ದೇಹದ ಬೇರೆ ಬೇರೆ ಭಾಗಗಳಿಗೆ ಪ್ರಸರಿಸುವುವು. ಹೊರ ಮತ್ತು ಒಳವರಿಸೆಗಳ ನಡುವೆ ಇರುವ ಅಮೀಬೊಸೈಟ್ಸ್ ಎಂಬ ಸಂಚಾರಿಕೋಶಗಳೂ ಪೋಷಕಾಂಶಗಳನ್ನು ದೇಹದ ಬೇರೆ ಬೇರೆ ಭಾಗಗಳಿಗೆ ಕೊಂಡೊಯ್ಯಲು ನೆರವಾಗುತ್ತವೆ. ಸಾಮಾನ್ಯವಾಗಿ ಜಠರ ಸರಳವಾದ ಒಂದೇ ಕೋಶದ ರೂಪದಲ್ಲಿರಬಹುದು ಅಥವಾ ಮಧ್ಯದಲ್ಲಿ ಗೋಡೆಗಳಂಥ ರಚನೆಯಿದ್ದು ಹಲವು ಭಾಗಗಳಾಗಿರಬಹುದು.

ಚಲನೆ: ಹೈಡ್ರೊಜೋóವ ವರ್ಗದ ಪಾಲಿಪ್‍ಗಳಂಥ ಸೂಕ್ಷ್ಮ ರೂಪದ ಕುಟುಕ ಕಣವಂತಗಳಲ್ಲಿ ಚಲನೆಗೆ ನೆರವಾಗತಕ್ಕ ವಿಶಿಷ್ಟ ರಚನೆಗಳಾಗಲೀ, ನಿರ್ದಿಷ್ಟ ಸ್ನಾಯುಗಳಾಗಲೀ ಇರುವುದಿಲ್ಲ. ಆದರೆ ಹೊರತೊಕ್ಕಿನಲ್ಲೂ ಜಠರಾವಕೋಶದ ಒಳಪೊರೆಯಲ್ಲೂ ಎಪಿಥೀಲಿಯಲ್ ಸ್ನಾಯುಕೋಶಗಳುಂಟು. ಅವುಗಳ ತಳಭಾಗ ಮೀಸೊಗ್ಲಿಯಕ್ಕೆ ಬಂಧಿಸಿದೆ. ಅವು ಹೊರಚರ್ಮದಲ್ಲಿ ನೀಳವಾಗಿಯೂ ಜಠರಾವಕಾಶದ  ಒಳಪೊರೆಯಲ್ಲೂ ವರ್ತುಲಾಕಾರದ ಪಟ್ಟಿಯಂತೆ ಅಡ್ಡಡ್ಡಲಾಗಿಯೂ ಜೋಡಿಸಿಕೊಂಡಿರುತ್ತವೆ. ವೃತ್ತಸ್ನಾಯುಕೋಶಗಳ ಸಂಕೋಚದಿಂದ ದೇಹ ನೀಳವಾಗುತ್ತದೆ. ನೀಳಸ್ನಾಯು ಕೋಶಗಳ ಸಂಕೋಚದಿಂದ ದೇಹ ಕಿರಿದಾಗುತ್ತದೆ. ದೇಹವನ್ನು ಬಾಗಿಸುವುದಕ್ಕೂ ಇದರಿಂದ ಸಾಧ್ಯವಾಗುತ್ತದೆ. ಕಡಲ ಹೂವಿನಂಥ ದೊಡ್ಡ ಪಾಲಿಪ್‍ಗಳಲ್ಲಿ ಸ್ನಾಯುಕೋಶಗಳಿಲ್ಲದಿದ್ದರೂ ಅವುಗಳ ಕಾರ್ಯವನ್ನು ನಿರ್ವಹಿಸಬಲ್ಲ ವಿಶಿಷ್ಟ ಸ್ನಾಯುಕ್ಷೇತ್ರಗಳುಂಟು. ಜಠರಾವಕಾಶವನ್ನು ವಿಭಾಗಿಸುವ ಗೋಡೆಗಳ ಮುಖದುದ್ದಕ್ಕೂ ನೀಳಸ್ನಾಯುಕೋಶಗಳ ವರಿಸೆ ಕಂಡುಬರುತ್ತದೆ. ಈ ಪ್ರಾಣಿಗಳ ಮೀಸೋಗ್ಲಿಯಕ್ಕೆ ಹೆಚ್ಚು ಸ್ಥಿತಿಸ್ಥಾಪನಶಕ್ತಿ ಇದೆ. ಜಠರಾವಕಾಶ ವಿಸ್ತಾರವಾಗಿದ್ದು ನೀರಿನಿಂದ ತುಂಬಿರುತ್ತದೆ. ನೀರಿನ ಒತ್ತಡಕ್ಕೆ ಒದೆಕೊಟ್ಟುಕೊಂಡು ಈ ಸ್ನಾಯು ಕೋಶಗಳು ಕ್ರಿಯಾಮುಖವಾಗುತ್ತವೆ. ಇವುಗಳಲ್ಲಿ ಪ್ರತ್ಯೇಕ ಸ್ನಾಯುಗಳಿದ್ದರೂ ಇವು ಕೇವಲ ಒಂದು ವರಿಸೆಕೋಶಗಳಿಂದ ಮಾತ್ರ ರಚನೆಯಾಗಿರುತ್ತವೆ.

ಮೆಡೂಸಗಳಲ್ಲಿ ಸ್ನಾಯುಗಳು ಎಪಿಥೀಲಿಯಲ್ ಕೋಶಗಳ ರೂಪದಲ್ಲಿವೆ. ಕೊಡೆಯಂಥ ಮೆಡೂಸಗಳ ದೇಹದ ನಿಮ್ನ ಪ್ರದೇಶದಲ್ಲಿ ಮಾತ್ರವಿರುವ ಇವು ವೃತ್ತಾಕಾರವಾಗಿ ತ್ರಿಜ್ಯಮುಖದಲ್ಲಿ ಜೋಡಿಸಿಕೊಂಡಿವೆ. ಇವುಗಳ ಸಂಕೋಚನದಿಂದ ಕೊಡೆಯ ಮೇಲ್ಬಾಗದ ದೇಹದಲ್ಲಿ ಸ್ಪಂದನ ಚಲನೆಗಳಾಗುತ್ತವೆ. ಇವು ದೃಢವಾಗಿರುವ ಸ್ಥಿತಿಸ್ಥಾಪನ ಶಕ್ತಿಯುಳ್ಳ ಮೀಸೋಗ್ಲಿಯಕ್ಕೆ ಒದೆಕೊಟ್ಟುಕೊಂಡು ಕೆಲಸಮಾಡುತ್ತವೆ. ಕೊಡೆಯ ತಳಭಾಗದ ದೇಹಾವಕಾಶದಿಂದ ನೀರನ್ನು ಬಿರುಸಾಗಿ ಎರಚುವುದರಿಂದ ಮೆಡೂಸ ನೀರಿನಲ್ಲಿ ವೇಗವಾಗಿ ಈಜಿಕೊಂಡು ಹೋಗುತ್ತಿರುತ್ತದೆ. ಪ್ರತಿ ಸಂಕೋಚನದ ಅನಂತರ ಮೀಸೋಗ್ಲಿಯ ತನಗಿರುವ ಸಂಕೋಚನ ಶಕ್ತಿಯಿಂದ ದೇಹವನ್ನು ಮತ್ತೆ ಘಂಟಾಕೃತಿಗೆ ತಿರುಗಿಸುತ್ತದೆ.

ಕುಟುಕುಕಣವಂತಗಳ ಚಲನೆ ಬಹುಮಟ್ಟಿಗೆ ಮೈ ಮತ್ತು ಸ್ಪರ್ಶತಂತುಗಳನ್ನು ಚಾಚುವುದು, ಬಾಗಿಸುವುದು, ಕಿರಿದುಮಾಡುವುದು ಇತ್ಯಾದಿ ಕಾರ್ಯಗಳ ರೂಪದಲ್ಲಿರುತ್ತದೆ. ಮೆಡೂಸಗಳೂ ಕೆಲವು ಕಡಲಹೂಗಳೂ ನಿರಾಯಾಸವಾಗಿ ಈಜಬಲ್ಲವು. ಕಡಲಹೂವಿನಲ್ಲಿ ಚಲನೆ ಬಾಯಿಯಬಿಲ್ಲೆ (ಓವಲ್ ಡಿಸ್ಕ್) ಮತ್ತು ಸ್ಪರ್ಶತಂತುಗಳ ಬಡಿತ ಮತ್ತು ಮುಲುಕುವಿಕೆಗಳಿಂದ ನಡೆಯುತ್ತದೆ. ಸೈಫನೋಫೊರ ವರ್ಗದ ಹೈಡ್ರಾಯಿಡ್‍ಗಳು ತಮ್ಮ ದೇಹದಲ್ಲಿ ಮೆಡೂಸಗಳನ್ನು ಅಳವಡಿಸಿಕೊಂಡಿರುವುದರಿಂದ, ಮೆಡೂಸಗಳಿಗಿರುವ ಚಲನೆಯ ಸೌಲಭ್ಯವನ್ನು ತಾವೂ ಬಳಸಿಕೊಳ್ಳುತ್ತವೆ. ಕೆಲವು ಪಾಲಿಪ್‍ಗಳು ಪದಾರ್ಥಗಳಿಗೆ ಅಂಟಿಕೊಂಡಿರುವ ತಮ್ಮ ತಾಳಿನ ತಳದ ಬಿಲ್ಲೆಯ ಕೋಶಗಳ ಅಮೀಬಾಯಿಡ್ ಚಲನೆಯ ಸಹಾಯದಿಂದ ಸ್ಥಳದಿಂದ ಸ್ಥಳಕ್ಕೆ ಸ್ವಲ್ಪ ಮಟ್ಟಿಗೆ ಚಲಿಸಬಲ್ಲವು.

ಆಹಾರಸೇವನೆ : ಕುಟುಕುಕಣವಂತಗಳು ಮಾಂಸಾಹಾರಿಗಳು. ಅವು ತಮ್ಮ ಕುಟುಕುಕಣಗಳ ಸಹಾಯದಿಂದ ಸಾಗರದ ಹುಳುಗಳು, ಕ್ರಿಮಿಕೀಟಗಳು, ಡಿಂಭಗಳು ಮುಂತಾದ ಸಣ್ಣಪುಟ್ಟ ಜೀವಿಗಳನ್ನೂ ಮರಿಮೀನುಗಳನ್ನೂ ಇತರ ಕುಟುಕು ಕಣವಂತಗಳನ್ನೂ ಕುಟುಕಿ ಕೊಂದು ಭಕ್ಷಿಸುತ್ತವೆ. ಸ್ಕೈಫೋಜೋವ ವರ್ಗದ ಅಂಬಲಿ ಮೀನುಗಳಂಥ ಕೆಲವು ಪ್ರಾಣಿಗಳು ಆಹಾರವನ್ನು ಸಂಪಾದಿಸಲು ಕುಟುಕುಕಣಗಳನ್ನು ಬಳಸುವುದಿಲ್ಲ. ತಮ್ಮ ರೋಮಗಳ ಚಲನೆಯಿಂದ ಬರುವ ಜಲ ಪ್ರವಾಹದಲ್ಲಿರುವ ಸೂಕ್ಷ್ಮಜೀವಿಗಳನ್ನೂ ಸಣ್ಣ ಸಣ್ಣ ಸಾವಯವ ವಸ್ತುಗಳನ್ನೂ ಸೆಳೆದುಕೊಂಡು ಲೋಳೆಗೆ ಅಂಟಿಸಿಕೊಂಡು, ರೋಮಗಳ ಮತ್ತು ಸ್ಪರ್ಶತಂತುಗಳ ಸಹಾಯದಿಂದ ಬಾಯೊಳಕ್ಕೆ ತಳ್ಳಿಕೊಳ್ಳುತ್ತವೆ. ಕೆಲವು ಕುಟುಕುಕಣವಂತಗಳು ಬಾಯನ್ನು ಮೇಲಕ್ಕೆ ನೀಡಿ ಆಹಾರವನ್ನು ಸೆಳೆದುಕೊಳ್ಳುತ್ತವೆ. ಪಾಲಿಪ್‍ಗಳಲ್ಲಿ ಕೆಲವು ತಮಗಿಂತಲೂ ದೊಡ್ಡ ಜೀವಿಗಳನ್ನು ಈ ರೀತಿಯಾಗಿ ಸೆಳೆದುಕೊಂಡು ಭಕ್ಷಿಸಬಲ್ಲವು. ಆಳವಿಲ್ಲದ ಸಮುದ್ರದಲ್ಲಿ ವಾಸಿಸುವ ಹವಳಗಳು ತಮ್ಮ ದೇಹದ ಕೋಶಗಳ ನಡುವೆ ಶೈವಲಗಳನ್ನೂ ಹೊಂದಿರುತ್ತವೆ. ಶೈವಲಗಳು ನಡೆಸುವ ದ್ಯುತಿಸಂಶ್ಲೇಷಣ ಕ್ರಿಯೆಯ ಫಲವಾಗಿ ಮೂಡುವ ಉತ್ಪನ್ನಗಳನ್ನು ಹವಳಗಳನ್ನು ಸೇವಿಸುತ್ತವೆ. ತಾವು ಆಶ್ರಯಪಡೆದಿರುವ ಹವಳಗಳಿಗೆ ಈ ರೀತಿ ಸಹಾಯ ಮಾಡುತ್ತ ಶೈವಲಗಳು ಒಂದು ರೀತಿಯ ಸಹಜೀವನ ನಡೆಸುತ್ತವೆ. 

ಉಸಿರಾಟ: ಕುಟುಕುಕಣವಂತಗಳಲ್ಲಿ ಉಸಿರಾಟಕ್ಕಾಗಲಿ ಶುದ್ದೀಕರಣಕ್ಕಾಗಲಿ ನಿರ್ದಿಷ್ಟ ಅಂಗಗಳಿಲ್ಲ. ಜಠರಾವಕಾಶದಲ್ಲಿ ತುಂಬಿರುವ ದ್ರವದಲ್ಲಿರುವ ಅಥವಾ ವಾತಾವರಣದಲ್ಲಿರುವ ಆಮ್ಲಜನಕವನ್ನು ದೇಹಭಾಗಗಳು ಹೀರಿಕೊಂಡು ದೇಹದ ಕಶ್ಮಲಗಳನ್ನು ಹೊರದೂಡುತ್ತವೆ. ಮೇಲ್ವರ್ಗದ ಪ್ರಾಣಿಗಳಲ್ಲಿ ಕಂಡು ಬರುವ ರಕ್ತದಂಥ ದ್ರವ ಇಲ್ಲ. ಆದರೆ ದೇಹಾಂತರಾಳದಲ್ಲಿ ತುಂಬಿರುವ ದ್ರವ ಸ್ನಾಯುಕೋಶಗಳ ಸಂಕೋಚವಿಕಾಸಗಳಿಂದಲೂ, ರೋಮಗಳ ಚಲನೆಯಿಂದಲೂ ದೇಹದ ಎಲ್ಲ ಭಾಗಗಳಿಗೆ ಸಂಚರಿಸುವುದು. ಕಡಲ ಹೂವಿನಂಥ ಕೆಲವು ಪಾಲಿಪ್ ಜಾತಿಗಳ ದೇಹದಲ್ಲಿರುವ ನಾಳಗಳು ದ್ರವದ ಚಲನೆಗೆ ಸಹಕಾರಿಯಾಗಿವೆ. ಮೆಡೂಸಗಳಲ್ಲಿ ದೇಹಾಂತರಾಳ ಕಾಲುವೆಗಳಂತೆ ವಿಭಾಗವಾಗಿದ್ದು, ಇಡೀ ದೇಹದಲ್ಲೆಲ್ಲ ದ್ರವದ ಪರಿಚಲನೆಗೆ ವಿಶಿಷ್ಟ ರೀತಿಯಲ್ಲಿ ಸಹಕಾರಿಯೆನಿಸಿದೆ. (ನೋಡಿ- ಅಂಬಲಿ-ಮೀನು-(ಅರಿಲಿಯಾ))

ನರವ್ಯೂಹ: ನಿರ್ದಿಷ್ಟವೂ ಸುಸ್ಪಷ್ಟವೂ ಆದ ನರಗಳಿಲ್ಲದ್ದರಿಂದ ಕುಟುಕುಕಣವಂತಗಳ ನರವ್ಯೂಹ ತೀರ ಕೆಳಮಟ್ಟದ್ದಾಗಿದೆ. ಅಲ್ಲದೆ. ದೇಹದಲ್ಲಿ ಅಲ್ಲಲ್ಲಿ ಕಂಡುಬರುವ ಮೂಲರೂಪದ ನರಗಳಲ್ಲಿ ನರದ ಉದ್ರೇಕ ನಿರ್ದಿಷ್ಟ ಮುಂಬಿನಲ್ಲಿ ಹಾಯುವುದೂ ಇಲ್ಲ. ಅವುಗಳ ಬಹುಧ್ರುವೀ (ಮಲ್ಟಿಪೋಲಾರ್) ನರಕೋಶಗಳು ಅಲ್ಲಲ್ಲಿ ಜಾಲದಂತೆ ಒಟ್ಟುಗೂಡಿರುತ್ತವೆ. ಪಾಲಿಪ್‍ಗಳಲ್ಲಿ ಸಾಮಾನ್ಯವಾಗಿ ಇಂಥ ಒಂದೇ ಒಂದು ಜಾಲವಿರುತ್ತದೆ. ಮೆಡೂಸಗಳಲ್ಲಿ ಇಂಥ ಎರಡು ಜಾಲಗಳಿರುತ್ತವೆ. ಅದರಲ್ಲಿ ಒಂದು ಅದರ ಈಜು ಚಲನೆಗಳಿಗೂ ಇನೊಂದು ದೇಹದ ಇತರ ಚಲನೆಗಳಿಗೂ ಸಂಬಂಧಿಸಿವೆ. ಮೆಡೂಸಗಳಲ್ಲಿ ಜ್ಞಾನೇಂದ್ರಿಯಗಳುಂಟು. ಇವುಗಳಲ್ಲಿ ಸರಳರೀತಿಯ ನೇತ್ರೇಂದ್ರಿಯ (ಆಸೆಲಸ್) ಮತ್ತು ಸ್ಥಿತಿಜ್ಞಾನೇಂದ್ರಿಯ (ಸ್ಟ್ಯಾಟೊಸಿಸ್ಟ್) ಮುಖ್ಯವಾದವು 
ನೇತ್ರೇಂದ್ರಿಯ (ಆಸೆಲಸ್) ಮತ್ತು ಸ್ಥಿತಿಜ್ಞಾನೇಂದ್ರಿಯ (ಸ್ಟ್ಯಾಟೊಸಿಸ್ಟ್) ಮುಖ್ಯವಾದವು ಪದಾರ್ಥಗಳಿಗೆ ಕಚ್ಚಿಕೊಂಡು ಜೀವಿಸುವ ಸ್ಥಾವರ ರೂಪಿಗಳಾದ ಪಾಲಿಪ್‍ಗಳಲ್ಲಿ ಜ್ಞಾನೇಂದ್ರಿಯಗಳಿಲ್ಲ. ಆದರೆ ಅವುಗಳಲ್ಲಿ ನರಕೋಶಗಳ ಜಾಲ ಹೆಚ್ಚು ವ್ಯಾಪಕವಾಗಿರುವುದು ಕಂಡುಬರುತ್ತದೆ. ಅಂಬಲಿಮೀನಿನಂಥ ಕೆಲವು ಮೆಡೂಸಗಳ ಬಾಯಿಯ ಸುತ್ತಣ ಅಂಚಿನಲ್ಲಿ ನರಗಳ ರಚನೆಯಂಥ ಉಂಗುರವುಂಟು. ಯಾವುದಾದರೂ ಪ್ರಚೋದನೆ ಒದಗಿದಾಗ ಉದ್ರೇಕ ಎಲ್ಲ ಮುಖಗಳಿಗೂ ಹರಡುತ್ತದೆ. ಉದ್ರೇಕದ ತೀವ್ರತೆ ಪ್ರಚೋದನೆಯ ತೀವ್ರತೆಯನ್ನೂ ಪುನರಾವರ್ತನೆಯನ್ನೂ ಅವಲಂಬಿಸಿರುತ್ತದೆ. ಒಮ್ಮೆ ದೊರಕಿದ ಪ್ರಚೋದನೆ ಯಾವ ಗಣನೀಯ ಉದ್ರೇಕವನ್ನೂ ಮೂಡಿಸದಿರಬಹುದು. ಆದರೆ ಅದೇ ಪ್ರಚೋದನೆ ಮತ್ತೆಮತ್ತೆ ದೊರೆತಾಗ ಉದ್ರೇಕ ಸಾಗಿ ನರಕೋಶಗಳ  ಇಡೀ ಜಾಲಕ್ಕೇ ವ್ಯಾಪಿಸುವುದು.

ಕುಟುಕುಕಣಗಳು: ಈ ವಂಶದ ಪ್ರಾಣಿಗಳು ಜೀವನದ ಹೋರಾಟದಲ್ಲಿ ಯಶಸ್ವಿಯಾಗಿ ಉಳಿದುಕೊಂಡು ಬಂದಿರುವುದಕ್ಕೆ ಅವುಗಳಲ್ಲಿರುವ ಕುಟುಕುಕಣಗಳೇ ಮುಖ್ಯಕಾರಣವೆಂದು ಭಾವಿಸುವುದುಂಟು. 5ರಿಂದ 100 ಮೈಕ್ರಾನುಗಳಷ್ಟು ಸೂಕ್ಷ್ಮವಾಗಿರುವ ಈ ಕುಟುಕುಕಣಗಳು ಕೋಶಗಳಲ್ಲಿ ಅಡಗಿವೆ. ಅವು ರಚನೆಯಲ್ಲಿ ತುಂಬ ವೈವಿಧ್ಯವನ್ನು ಪ್ರದರ್ಶಿಸುತ್ತವೆ. ಸುಮಾರು ಇಪ್ಪತ್ತು ವಿಧದ ಕುಟುಕು ಕಣಗಳಾಗಿ ಮಾರ್ಪಟ್ಟಿರುತ್ತದೆ. ಪ್ರತಿಯೊಂದು ಕುಟುಕುಕಣವೂ ಒಂದೊಂದು ಕೋಶದಲ್ಲಿ ಹುದುಗಿರುವುದರಿಂದ ಅದಕ್ಕೆ ಎರಡು ಆವರಣಗಳಿರುತ್ತವೆ. ಹೊರಕೋಶದೊಳಗೆ ಅಡಗಿರುವ ಟೊಳ್ಳುಕೋಶದ ತುದಿ ಆವರಣಗಳಿರುತ್ತವೆ ಹೊರಕೋಶದೊಳಗೆ ಅಡಗಿರುವ ಟೊಳ್ಳುಕೋಶದ ತುದಿ ಚುಚ್ಚುಮೊನೆಯುಳ್ಳ ದೀರ್ಘನಾಳವಾಗಿ ವರ್ಧಿಸಿರುತ್ತದೆ. ಆ ನಾಳದ ಆರಂಭದಲ್ಲಿ ಒಳಮುಖವಾಗಿ ಚಾಚಿಕೊಂಡಿರುವ ಮುಳ್ಳುಗಳಿರುತ್ತವೆ. ಸಾಧಾರಣಸ್ಥಿತಿಯಲ್ಲಿ ಆ ನಾಳ ಸುರುಳಿಸುತ್ತಿಕೊಂಡು ಕೋಶದೊಳಗೆ ಅಡಗಿರುತ್ತದೆ. ಅದರ ಮೇಲೆ ಒಂದು ಮುಚ್ಚಳ ಮುಚ್ಚಿರುತ್ತದೆ. ನಾಳದ ಆದಿಯಲ್ಲಿ ಮುಳ್ಳಿರುವುದರಿಂದ ಕುಟುಕುಕಣವಂತಗಳ ಮೈ ಮುಟ್ಟಲು ತುರುಚಾಗಿರುತ್ತದೆ.

ಯಾವುದಾದರೂ ಅನ್ಯವಸ್ತು (ಪ್ರಾಣಿ) ಸೋಂಕಿತೆಂದರೆ ಕುಟುಕುಕಣದ ಮೇಲಿನ ಮುಚ್ಚಳ ಮೇಲ್ಮುಖವಾಗಿ ಹಾರಿ ಅದು ಆಸ್ಫೋಟಿಸುತ್ತದೆ. ತತ್‍ಕ್ಷಣದ ಕೋಶದೊಳಗೆ ಅಡಗಿರುವ ನಾಳ ಸ್ಟ್ರಿಂಗಿನಂತೆ ಹೊರಚಾಚುತ್ತದೆ. ಅದರ ತಳದಲ್ಲಿರುವ ಮುಳ್ಳುಗಳು ವಿರುದ್ದ ದಿಕ್ಕಿಗೆ ತಿರುಗಿ ಪ್ರಾಣಿಯ ದೇಹವನ್ನು ಚುಚ್ಚಿ ನಾಳದ ತುದಿ ಒಳ ನುಗ್ಗಲು ಸಹಾಯಮಾಡುತ್ತದೆ. ಕುಟುಕುಕಣದೊಳಗೆ ಸ್ರವಿಸುವ ವಿಷದ್ರವ ನಾಳದ ಮೂಲಕ ಧಾರೆಯಂತೆ ಪ್ರಾಣಿಯ ದೇಹಕ್ಕೆ ನುಗ್ಗುತ್ತದೆ. ಆಗ, ನಿಸ್ತೇಜವಾಗುವ ದೇಹವನ್ನು ಅದು ನುಂಗಿಕೊಳ್ಳುತ್ತದೆ. ಕುಟುಕುಕಣ ಆಸ್ಫೋಟಿಸಲು ಅಗತ್ಯವಾಗಿರುವ ಶಕ್ತಿಯ ಸ್ವರೂಪ ಇನ್ನೂ ಸ್ಪಷ್ಟವಾಗಿ ಅರಿವಾಗಿಲ್ಲ. ಅದು ಸ್ಫೋಟಿಸುವಾಗ ಕೋಶದೊಳಗೆ ತುಂಬಿರುವ ನೀರು ಮೇಲೇರಿ ಕೋಶ ಸಂಕುಚಿಸುವುದು. ಕುಟುಕು ಕಣಗಳು ಯಾವ ನರದ ನಿಯಂತ್ರಣದಲ್ಲೂ ಕೆಲಸಮಾಡುವಂತೆ ತೋರುವುದಿಲ್ಲ. ತಟಸ್ಥ ರಸಾಯನ ವಸ್ತುಗಳ ಸಂಪರ್ಕದಿಂದ ಅವು ಸ್ಫೋಟಿಸುವುದಿಲ್ಲ. ಆದರೆ ಸ್ವಾಭಾವಿಕ ಸನ್ನಿವೇಶದಲ್ಲಿ ಆಸ್ಫೋಟಿಸಬೇಕಾದರೆ ಪ್ರಾಣಿಗಳ ಸ್ಪರ್ಶದಂಥ ಯಾವುದಾದರೂ ಬಾಹ್ಯ ಸಂಪರ್ಕ ಅಗತ್ಯವೆನಿಸುತ್ತದೆ.

ಕುಟುಕುಕಣಗಳು ವಿವಿಧ ರೀತಿಯಲ್ಲಿ ಉಪಯುಕ್ತವೆನಿಸುತ್ತವೆ. ಸಣ್ಣಪುಟ್ಟ ಪ್ರಾಣಿಗಳನ್ನು ಕೊಂದು ನುಂಗಲು ಇವು ಸಹಾಯ ಮಾಡುತ್ತವೆ. ಕೆಲವು ಪ್ರಾಣಿಗಳ ಕುಟುಕುಕಣಗಳಲ್ಲಿ ಮುಳ್ಳುಗಳಿಲ್ಲ. ಇವು ಆಹಾರ ವಸ್ತುಗಳನ್ನು ಸುಮ್ಮನೆ ಅಂಟಿಸಿಕೊಂಡು ಜೀರುಗುಣಿಕೆಯಂತೆ ಹಿಡಿದುಕೊಳ್ಳುತ್ತವೆ. ಸೆರೆಹಿಡಿಯುವುದರ ಆಹಾರವನ್ನು ಹಿಡಿಯಲು ನೆರವಾಗುತ್ತವೆ. ಅಲ್ಲದೆ ಅವು ಕುಟುಕುಕಣವಂತಗಳ ಆತ್ಮರಕ್ಷಣೆಗೂ, ಪದಾರ್ಥಗಳಿಗೆ ಕಚ್ಚಿಕೊಂಡು ಸ್ಥಾವರಸ್ಥಿತಿಯಲ್ಲಿ ಇರುವುದಕ್ಕೂ ಸಹಾಯಮಾಡುತ್ತವೆ. ಒಮ್ಮೆ ಆಸ್ಫೋಟಿಸಿದ ಕುಟುಕುಕಣ ತನ್ನ ಸ್ವಾಭಾವಿಕಸ್ಥಾನದಿಂದ ಹೊರಬೀಳುತ್ತವೆ. ಅನಂತರ ಅದರ ಸ್ಥಾನವನ್ನು ಮತ್ತೊಂದು ನೀಡೊಬ್ಲಾಸ್ಪ್ ಕೋಶ ಆಕ್ರಮಿಸಿ ನೂತನವಾಗಿ ಕುಟುಕುಕಣವನ್ನು ಉತ್ಪಾದಿಸುತ್ತವೆ.

ಆಹಾರವಸ್ತು ಜಠರಾಕೋಶವನ್ನು ಪ್ರವೇಶಿಸಿದ ಮೇಲೂ ಅಗತ್ಯವೆನಿಸಿದರೆ ಅದರ ಒಳಪೊರೆಯಲ್ಲಿರುವ ಕುಟುಕುಕಣಗಳು ಆಹಾರವನ್ನು ಮತ್ತೆ ಮತ್ತೆ ಚುಚ್ಚಿ ನಿಸ್ತೇಜ ಮಾಡಿ ಜೀರ್ಣಕಾರ್ಯಕ್ಕೆ ಅಣಿಗೊಳಿಸುತ್ತವೆ.

 ಕುಟುಕುಕಣಗಳು ಸ್ರವಿಸುವ ವಿಷದ್ರವದ ರಾಸಾಯನಿಕ ಸ್ವರೂಪದ ಬಗ್ಗೆ ನಿರ್ದಿಷ್ಟ ಅಂಶಗಳು ಇನ್ನೂ ತಿಳಿದುಬಂದಿಲ್ಲ. ಅದರೂ ಕೆಲವು ಪ್ರಾಣಿಗಳಲ್ಲಿ ಈ ವಿಷ ವಸ್ತು ತೀವ್ರಸ್ವರೂಪದ್ದಾಗಿರುವುದೆಂದು ದೃಢಪಟ್ಟಿದೆ. ಫೈಸೇಲಿಯದಂಥ ದೊಡ್ಡ ಕುಟುಕುಕಣವಂತಗಳ ವಿಷದ್ರವ ಮಾನವನಿಗೆ ತೀವ್ರತರವಾದ ಯಾತನೆಯನ್ನುಂಟು ಮಾಡಬಲ್ಲದು. ಚುಚ್ಚುವಿಕೆಗೆ ಒಳಗಾದ ಅಂಗ ತಾತ್ಕಾಲಿಕ ಸಿಷ್ಕ್ರಿಯೆಗೆ ಒಳಗಾಗಬಹುದು. ಅಪರೂಪಕ್ಕೆ ಸಾವೂ ಸಂಭವಿಸಬಹುದು.

ವಂಶಾಭಿವೃದ್ಧಿ: ಎಲ್ಲ ಕುಟುಕುಕಣವಂತಗಳಲ್ಲೂ ಲಿಂಗರೀತಿಯ ವಂಶಾಭಿವೃದ್ಧಿ ಜೀವನದ ಒಂದು ಅಂತಸ್ತಿನಲ್ಲಿ ನಡೆಯುತ್ತದೆ. ಬಹುಸಂಖ್ಯಾತ ಪ್ರಾಣಿಗಳಲ್ಲಿ ಲಿಂಗ ಪ್ರತ್ಯೇಕವಾಗಿದ್ದರೂ ಅಪರೂಪವಾಗಿಯಾದರೂ ಉಭಯಲಿಂಗಿಗಳು ಇರುವುದುಂಟು. ತತ್ತಿ ಮತ್ತು ಶುಕ್ಲಾಣುಗಳನ್ನು ತಾಯಿ ಅಥವಾ ತಂದೆ ಪ್ರಾಣಿ ಬಾಯಿಯ ಮೂಲಕ ಹೊರದೂಡುವುದು. ದೇಹದಿಂದ ಹೊರಗೆ ತತ್ತಿ ಶುಕ್ಲಾಣುವಿನೊಡನೆ ಸಂಯೋಗವಾಗಿ ಗರ್ಭಧರಿಸುವುದು. ಗರ್ಭಧರಿಸಿದ ತತ್ತಿ ವಿಭಾಗವಾಗಿ ಉದ್ಭವಿಸುವ ಬ್ಲಾಸ್ಟುಲ ಅಷ್ಟಾಗಿ ಟೊಳ್ಳಾಗಿರದೆ ತುಂಬಿಕೊಂಡಂತಿರುತ್ತದೆ. ಬ್ಲಾಸ್ಟುಲದಿಂದ ಗ್ಯಾಸ್ಟ್ರುಲ ಅವಸ್ಥೆ ಬೆಳೆಯುವ ವಿಧಾನ ಬೇರೆಬೇರೆ ಪ್ರಾಣಿಗಳಲ್ಲಿ ಬೇರೆಬೇರೆಯಾಗಿರುತ್ತದೆ. ಗ್ಯಾಸ್ಟ್ರುಲ ಕೊನೆಗೆ ಪ್ಲಾನುಲ ಎಂಬ ಡಿಂಬಾವಸ್ಥೆಯ ರೂಪವನ್ನು ತಳೆಯುತ್ತದೆ. ಅದರ ಮೈತುಂಬ ರೋಮಗಳಿವೆ. ನೀರಿನಲ್ಲಿ ಅದು ಈಜುತ್ತಿರುತ್ತದೆ. ಪಾಲಿಪ್‍ನ ಅವಸ್ಥೆಯಿರುವ ಪ್ರಾಣಿಗಳಲ್ಲಿ ಈ ಡಿಂಬ ಸ್ವಲ್ಪಕಾಲದ ಅನಂತರ ತನ್ನ ಮುಂಭಾಗದ ತುದಿಯಿಂದ ಪದಾರ್ಥಕ್ಕೆ ಕಚ್ಚಿಕೊಳ್ಳುತ್ತದೆ. ಕಚ್ಚಿಕೊಂಡಿರುವ ಆ ಭಾಗ ಪಾಲಿಪ್ಪ್‍ನ ತಾಳಾಗುತ್ತದೆ. ಅದರ ಇನ್ನೊಂದು ತುದಿಯಲ್ಲಿ ಬಾಯಿಯೂ ಅದರ ಸುತ್ತ ಸ್ವರ್ಶ ತಂತುಗಳೂ ಹುಟ್ಟುತ್ತವೆ. ಈ ಅವಸ್ಥೆಯನ್ನು ಆಕ್ಟಿನ್ಯೂಲ ಎನ್ನುವರು. ಸ್ವಲ್ಪ ಹೆಚ್ಚು ಕಡಿಮೆ ಇದು ಪಾಲಿಪ್ ರೂಪದಂತೆಯ ಇರುತ್ತದೆ. ಇದರ ಹಿಂದಿನ ತುದಿಯಲ್ಲಿ ಮೆನ್ಯೂಬ್ರಿಯಂ ಕೊಳವೆಯೂ ಆ ಕೊಳವೆಯ ತುದಿಯಲ್ಲಿ ಬಾಯಿಯೂ ಮೂಡುತ್ತವೆ. ಬಾಯಿಯ ಅಪಮುಖದ ಮಧ್ಯಭಾಗ ಮೆಡೂಸದ ಗಂಟೆಯಾಗಿ ರೂಪುಗೊಳ್ಳುತ್ತದೆ.

ಕೂಡುಜೀವನ ಮತ್ತು ಬಹುರೂಪತೆ: ಮೆಡೂಸಗಳು ಕೂಡುಜೀವನವನ್ನು ನಡೆಸುವುದು ಕಂಡುಬಂದಿಲ್ಲವಾದರೂ ಈ ವಂಶಗಳ ಎಲ್ಲ ಜೀವಿಗಳ ಪಾಲಿಪ್‍ನಲ್ಲೂ ಕೂಡುಜೀವನ  (ಕಲೋನಿಯಲ್ ಲೈಫ್) ಪ್ರಧಾನವಾಗಿ ಕಂಡುಬರುತ್ತದೆ. ಅಲಿಂಗ ರೀತಿಯ ವಂಶಾಭಿವೃದ್ಧಿಯಿಂದ ಪಾಲಿಪ್ ಕವಲೊಡೆದ ಸಮುದಾಯ ಜೀವನವನ್ನು ರಚಿಸಿಕೊಳ್ಳುತ್ತದೆ. ದೇಹಾಂತರಾಳದ ಜಠರಾವಕಾಶ ಎಲ್ಲ ಪಾಲಿಪ್‍ಗಳಿಗೂ ಸಾಗಿ ಬಂದಿರುತ್ತದೆ. ಒಂದು ಪಾಲಿಪ್ ಗಳಿಸಿದ ಆಹಾರ ಆ ಮೂಲಕ ಎಲ್ಲ ಪಾಲಿಪ್‍ಗಳಿಗೂ ಬೇರೆಬೇರೆ ಕ್ರಿಯೆಗಳನ್ನು ನಿರ್ವಹಿಸಲು ಅನುಕೂಲಿಸುವಂಥ ದೇಹರಚನಾ ವೈಶಿಷ್ಟ್ಯವನ್ನು ತಳೆದಿರುತ್ತವೆ. ಹೈಡ್ರೊಜೋóವನ್ ಪಾಲಿಪ್‍ಗಳ ಸಮುದಾಯದಲ್ಲಿ ಕೆಲವು ಪಾಲಿಪ್‍ಗಳು ರಕ್ಷಣಾಕಾರ್ಯವನ್ನೂ ಇನ್ನು ಕೆಲವು ಆಹಾರಾನ್ವೇಷಣೆಯನ್ನೂ ಮತ್ತೆ ಕೆಲವು ಸಂತಾನೋತ್ಪತ್ತಿಯನ್ನೂ ನಿರ್ವಹಿಸುತ್ತವೆ. ಕೆಲವು ಹೈಡ್ರೋeóÉೂೀವನ್ ಸಮುದಾಯದಲ್ಲಿ ಗೋಚರಿಸುವ ಮೆಡೂಸಗಳು ಸಂಘದ ಪಾಲನೆಗೆ ನೆರವಾಗುತ್ತವೆ. ಹೀಗೆ ಒಂದು ಪ್ರಭೇದದಲ್ಲಿ ಹಲವು ವಿಧದ ಜೀವಿಗಳಿದ್ದು ಜೀವಿಸುವುದನ್ನು ಬಹುರೂಪತೆ (ಪಾಲಿಮಾರ್ಫಿಸಂ) ಎನ್ನುವರು.

ಇತರ ಜೀವಿಗಳೊಡನೆ ಸಹಜೀವನ ಮತ್ತು ಪರಾವಲಂಬನೆ: ಕುಟುಕುಕಣವಂತಗಳು ಮಾಂಸಾಹಾರಿಗಳಾದರೂ ಇತರ ಪ್ರಾಣಿಗಳೊಡನೆ ಹೊಂದಿಕೊಂಡು ಸಹಜೀವನ ನಡೆಸುತ್ತದೆ. ಫೈಸೇಲಿಯವೂ ಅಂಬಲಿಮೀನುಗಳೂ ಸಣ್ಣ ಮೀನುಗಳೊಡನೆ ಸಂಬಂಧ ಹೊಂದಿರುತ್ತವೆ. ಆ ಮೀನುಗಳು ಮೇಲಿನ ಕುಟುಕುಕಣವಂತಗಳ ಸ್ಪರ್ಶ ತಂತುಗಳಲ್ಲಿ ಅಡಗಿ ಆಶ್ರಯಪಡೆದಿರುತ್ತವೆ. ಅದಕ್ಕೆ ಪ್ರತಿಯಾಗಿ ಆಶ್ರಯದಾತಕ್ಕೆ ಒದಗಬಹುದಾದ ಶತ್ರುಭೀತಿಯ ಬಗ್ಗೆ ಸಕಾಲದಲ್ಲಿ ಎಚ್ಚರಿಕೆ ನೀಡುತ್ತವೆ. ಸ್ಪರ್ಶ ತಂತುವಿನಲ್ಲಿ ಮೀನುಗಳು ಆಶ್ರಯ ಪಡೆದಿದ್ದರೂ ಅಲ್ಲಿರುವ ಕುಟುಕುಕಣಗಳು ಆಸ್ಫೋಟಿಸುವುದಿಲ್ಲ. ಎಂದರೆ ಅವುಗಳ ಇರವಿಗೆ ಆಶ್ರಯದಾತ ಒಗ್ಗಿಕೊಂಡಿರುತ್ತದೆ. ಹೀಗೆ ಎರಡು ಜೀವಿಗಳು ಒಂದಕ್ಕೊಂದಕ್ಕೆ ಸಹಾಯವಾಗಿದ್ದುಕೊಂಡು ನಡೆಸುವ ಜೀವನವನ್ನು ಸಹಜೀವನ (ಸಿಂಬಿಯೋಸಿಸ್) ಎಂದು ಕರೆಯುವರು. ಹೀಗೆಯೇ, ಕೆಲವು ಕಡಲ ಹೂಗಳು ಸಂನ್ಯಾಸಿ ಏಡಿ ಧರಿಸಿರುವ ರಕ್ಷಣೆಯ ಚಿಪ್ಪಿನ ಮೇಲೆ ಆಶ್ರಯ ಪಡೆದಿರುತ್ತದೆ. ಏಡಿ ಹೋದ ಕಡೆಗೆ ಅವೂ ಸಾಗುತ್ತಿರುತ್ತವೆ. ಇನ್ನು ಕೆಲವು ಸ್ಪಂಜುಗಳ ಬುಡದಲ್ಲೊ ಕಡಲಬೀಸಣಿಗೆಗಳ (ಸೀ ಫ್ಯಾನ್) ಮೇಲೊ ವಾಸಿಸುತ್ತವೆ. ಕೆಲವು ಹೈಡ್ರಾಯಿಡ್ ಪ್ರಾಣಿಗಳು ಮೀನು, ಹುಳು, ಚಿಪ್ಪುಮೀನು ಮುಂತಾದ ಪ್ರಾಣಿಗಳೊಡನೆ ಸಹಜೀವನ ನಡೆಸುತ್ತವೆ. ಅವು ಆಶ್ರಯದಾತಕ್ಕೆ ಯಾವ ತೊಂದರೆಯನ್ನೂ ಕೊಡದೆ ಅದರೊಡನೆ ಹೊಂದಿಕೊಂಡು ಜೀವಿಸುತ್ತವೆ. ಆಶ್ರಯದಾತ ಸಂಗ್ರಹಿಸುವ ಆಹಾರದ ಸೇವನೆಯಲ್ಲಿ ತಾವೂ ಭಾಗಿಯಾಗುತ್ತವೆ. ಇಂಥ ಸಂಬಂಧವನ್ನು ಸಹಭೋಜನ ಜೀವನ (ಕಮೆನ್ಸಾಲ್) ಎನ್ನುವರು.

ಕೆಲವು ಕುಟುಕು ಕಣವಂತಗಳು ಪರಾವಲಂಬಿಗಳು. ಹೈಡ್ರಿಕ್ತಿಸ್ ಎಂಬ ಪ್ರಾಣಿ ಕೆಲವು ಮತ್ಸ್ಯಪ್ರಭೇದಗಳಲ್ಲೂ ಪಾಲಿಪೋಡಿಯಂ ಎಂಬುದು ಸ್ಟರ್ಜನ್ ಎಂಬ ದೊಡ್ಡ ಮೀನಿನ ತತ್ತಿಯಲ್ಲೂ ಆಶ್ರಯ ಪಡೆದು ಪರಾವಲಂಬಿ ಜೀವನ ನಡೆಸುತ್ತವೆ.

ಕೆಲವು ಹೈಡ್ರಗಳಲ್ಲಿ ಶೈವಲಗಳು ಇರುವುದನ್ನು ಆಗಲೆ ಉಲ್ಲೇಖಿಸಿದೆ. ಹೈಡ್ರ ಶೈವಾಲದ ದ್ಯುತಿಸಂಶ್ಲೇಷಣಕ್ರಿಯೆಯಿಂದ; ಬಿಡುಗಡೆಯಾಗುವ ಆಮ್ಲಜನಕವನ್ನು ಬಳಸಿಕೊಳ್ಳುತ್ತದೆ.

ವಿಕಾಸಕ್ರಮದಲ್ಲಿ ಕುಟುಕುಕಣವಂತಗಳ ಸ್ಥಾನ: ಪ್ರಾಣಿಪ್ರಪಂಚದ ವಿಕಾಸದ ನಿಚ್ಚಣಿಕೆಯಲ್ಲಿ ಕುಟುಕು ಕಣವಂತಗಳ ಸ್ಥಾನವನ್ನು ಇನ್ನೂ ನಿರ್ದಿಷ್ಟವಾಗಿ ನಿರ್ಧರಿಸಿಲ್ಲ. ಕೂಡುಏಕಾಣುಜೀವಿಗಳಿಂದ (ಕಲೋನಿಯಲ್ ಪ್ರೊಟೊeóÉೂೀವ) ಈ ವಂಶದ ಪ್ರಾಣಿಗಳು ಉದಿಸಿವೆ ಎಂದು ಕೆಲವರು ಸೂಚಿಸುವರು. ಇನ್ನು ಕೆಲವರು ಇವು ಚಪ್ಪಟೆಹುಳುಗಳಂಥ (ಫ್ಲಾಟ್‍ವರ್ಮ್) ಆದಿಪೂರ್ವಜರಿಂದ ವಿಕಾಸವಾಗಿದೆಯೆಂದು ವಾದಿಸುವರು. ಇವೆರಡೂ ಸಾಧುವಾಗಿ ತೋರುವುದಿಲ್ಲ. ಇವು ಏಕಾಣುಜೀವಿಗಳಿಂದ ಉದಿಸಿದುವೆಂದು ನಂಬುವುದಾದರೆ ಇವು ಬಹುಕೋಶ ಜೀವಿಗಳ ವಿಕಾಸದ ನಿಚ್ಚಣಿಕೆಯಲ್ಲಿ ಮೊದಲಮೆಟ್ಟಿಲಲ್ಲಿ ತಮ್ಮ ಸ್ಥಾನವನ್ನು ಪಡೆಯುತ್ತವೆ. ಈ ಪ್ರಾಣಿಗಳ ದೇಹದಲ್ಲಿ ಕೇವಲ ಎರಡು ವರಿಸೆಗಳನ್ನು ಅವುಗಳ ಹೊರ ಮತ್ತು ಒಳಚರ್ಮದ ವರಿಸೆಗಳಿಗೆ ರಚನೆ ಮತ್ತು ಕ್ರಿಯೆಯ ದೃಷ್ಟಿಯಲ್ಲಿ ಹೋಲಿಸಬಹುದು. ಎಂದರೆ, ಈ ವಂಶದ ಪ್ರಾಣಿಗಳು ಮೇಲ್ವರ್ಗದ ಪ್ರಾಣಿಗಳ ಬೆಳವಣಿಗೆಯಲ್ಲಿ ಕಂಡು ಬರುವ ಗ್ಯಾಸ್ಟ್ರುಲ ಅವಸ್ಥೆಗೆ ರಚನಾದಿ ವೈಶಿಷ್ಟ್ಯಗಳ ಸಮವೆನಿಸುತ್ತವೆ. ಚಪ್ಪಟೆಹುಳುಗಳಂಥ ಪೂರ್ವಜರಿಂದ ಉದಯವಾದವೆಂದು ಪರಿಗಣಿಸುವವರು ಆಂಥೊeóÉೂೀವದಲ್ಲಿ ಕಂಡುಬರುವ ದ್ವಿಪಾಶ್ರ್ವ ಸಮ್ಮಿತಿಯನ್ನು ಆಧಾರ ಮಾಡಿಕೊಂಡಿರುವರು. ಕಾಲಕ್ರಮದಲ್ಲಿ ಕಂಡುಬರುವ ದ್ವಿಪ್ವಾರ್ಶ ಸಮ್ಮಿತಿ ಒಂದೇ ಸ್ಥಳದಲ್ಲಿ ಸ್ಥಾವರವಾಗುಳಿದುದರ ಪರಿಣಾಮವಾಗಿ ಕೆಲವು ವರ್ಗಗಳ ಕುಟುಕುಕಣವಂತಗಳ ದೇಹ ತ್ರಿಜ್ಯ ಸೌಷ್ಠವವನ್ನು ಪಡೆಯಿತೆಂದು ವಾದಿಸಿರುವರು. ಅವರು ತಮ್ಮ ವಾದವನ್ನು ಮುಂದುವರಿಸುತ್ತ ಕುಟುಕುಕಣಗಳನ್ನು ಚಪ್ಪಟೆ ಹುಳುಗಳಲ್ಲಿ ಕಂಡುಬರುವ ರಾಬ್ಡೈಟ್‍ಕೋಶಗಳಿಗೆ ಹೋಲಿಸುವರು. ಮೇಲಿನ ಎರಡು ವಾದಗಳಲ್ಲಿ ಯಾವುದಕ್ಕೂ ಭ್ರೂಣಶಾಸ್ತ್ರದ ಆಧಾರಗಳು ದೊರೆತಿಲ್ಲ. ಕೆಲವು ಕುಟುಕುಕಣವಂತಗಳಲ್ಲಿ ಕಂಡು ಬರುವ ಮಧ್ಯದ ಜೀವಕಣಗಳ ವರಿಸೆಯೆನ್ನಬಹುದಾದ ಮೀಸೋಗ್ಲಿಯ ಚಪ್ಪಟೆ ಹುಳುಗಳಲ್ಲಿ ಕಂಡುಬರುವಂತೆ ಹೊರವರಿಸೆ ಜೀವಕಣಗಳಿಂದ ಉದ್ಬವವಾಗುತ್ತದೆ. ಅಲ್ಲದೆ, ಬಹುರೂಪತೆಯನ್ನು ಪ್ರದರ್ಶಿಸುವ ಈ ಪ್ರಾಣಿವಂಶದ ಆದಿಸ್ವರೂಪ ಪಾಲಿಪ್, ಮೆಡೂಸ, ಪ್ಲಾನುಲ-ಇವು 
ಮೂರರಲ್ಲಿ ಯಾವುದೆಂಬುದು ಇನ್ನೂ ನಿರ್ಧಾರವಾಗಿಲ್ಲ, ಆದ್ದರಿಂದ ಕುಟುಕುಕಣವಂತಗಳ ಸ್ಥಾನ ಅನಿರ್ದಿಷ್ಟವಾಗಿಯೇ ಉಳಿದಂತಾಗಿದೆ.

ವರ್ಗೀಕರಣ: ಕುಟುಕುಕಣವಂತಗಳನ್ನು ಹೈಡ್ರೊeóÉೂೀವ, ಸ್ಕೈಫೊeóÉೂೀವ ಮತ್ತು ಆಂಥೊeóÉೂೀವ ಎಂಬ ಮೂರುವರ್ಗಗಳಾಗಿ ವಿಂಗಡಿಸಿರುವರು. ಇವುಗಳಲ್ಲಿ ಮೊದಲವರ್ಗದ ಪ್ರಾಣಿಗಳು ಅತ್ಯಂತ ಸರಳರೀತಿಯ ದೇಹರಚನೆಯನ್ನೂ ಕೊನೆಯ ವರ್ಗದವು ಸಂಕೀರ್ಣರೀತಿಯ ದೇಹರಚನೆಯನ್ನೂ ಹೊಂದಿರುತ್ತವೆ. ಅಲ್ಲದೆ ಅವುಗಳ ಜಠರಾವಕಾಶ ವ್ಯಕ್ತಪಡಿಸುವ ರಚನೆಯನ್ನೂ ಆಧಾರಮಾಡಿಕೊಂಡು ಮೇಲಿನ ವರ್ಗೀಕರಣವನ್ನು ಮಾಡಿದೆ.

1 ಹೈಡ್ರೊeóÉೂೀವ: ಸಾಗರದ ಹೈಡ್ರಾಯಿಡ್‍ಗಳು, ಹೈಡ್ರೊಮೆಡೂಸಗಳು (ಹೈಡ್ರೊeóÉೂೀವನ್ ಅಂಬಲಿಮೀನು), ಸಿಹಿನೀರಿನ ಹೈಡ್ರಾಯಿಡ್‍ಗಳನ್ನು ಫೈಸೇಲಿಯ ಇತ್ಯಾದಿ ಪ್ರಾಣಿಗಳು ಈ ವರ್ಗಕ್ಕೆ ಸೇರಿವೆ. ಇವುಗಳ ಜಠರಾವಕಾಶ ಸರಳವಾಗಿದ್ದು ಅದರ ಟೊಳ್ಳುಭಾಗ ಸ್ಪರ್ಶ ತಂತುಗಳಿಗೂ ಹಾದು ಹೋಗಿರುತ್ತದೆ; ಜಠರಾವಕಾಶ ನಾಲ್ಕು ಅಥವಾ ಹೆಚ್ಚು ನಾಳಗಳಾಗಿ ಕವಲೊಡೆದಿರುತ್ತದೆ. ಈ ನಾಳಗಳು ಜಠರದ ಕೇಂದ್ರದಿಂದ ತ್ರಿಜ್ಯಮುಖವಾಗಿ ಹಾದುಹೋಗುತ್ತವೆ; ಸಾಮಾನ್ಯವಾಗಿ ಗಂಟೆಯಂಥ ಅವುಗಳ ದೇಹದ ಅಂಚಿನಲ್ಲಿ ಸುತ್ತಲೂ ಉಂಗುರದಂತೆ ಹಾದಿರುವ ನಾಳವಿದ್ದು ಎಲ್ಲ ತ್ರಿಜ್ಯನಾಳಗಳನ್ನೂ ಅದು ಕೂಡಿಸಿಕೊಂಡಿರುತ್ತದೆ. ಹೈಡ್ರಾಯಿಡ್ ರೂಪವೇ ಕೆಲವು ಪ್ರಾಣಿಗಳ ಪ್ರೌಢಾವಸ್ಥೆಯೆನಿಸುತ್ತದೆ. ಇನ್ನುಳಿದ ಪ್ರಾಣಿಗಳಲ್ಲಿ ಹೈಡ್ರಾಯಿಡ್ ರೂಪ ಅವುಗಳ ಕಿಶೋರವಸ್ಥೆ ಮಾತ್ರವಾಗಿರುತ್ತದೆ. ಅದು ಅಲಿಂಗ ರೀತಿಯಲ್ಲಿ ಅಂಬಲಿಮೀನುಗಳನ್ನು ಉತ್ಪತ್ತಿಮಾಡಿ ವಂಶಾಭಿವೃದ್ಧಿ. ಸಾಗರದಲ್ಲಿ ವಾಸಿಸುವ ಅನೇಕ ಹೈಡ್ರೊeóÉೂೀವಗಳು ಬಹುರೂಪಿ ಜೀವಿಗಳಾಗಿರುತ್ತವೆ.

2 ಸ್ಕೈಫೊeóÉೂೀವ: ಇವೆಲ್ಲ ಆಳವಿಲ್ಲದ ಸಮುದ್ರದಲ್ಲಿ ವಾಸಿಸುವ ದೊಡ್ಡ ಅಂಬಲಿಮೀನುಗಳು, ಒಂದು ಜಾತಿಮಾತ್ರ ಆಳವಾದ ಸಾಗರದಲ್ಲೂ ವಾಸಿಸುತ್ತದೆ. ಆದರೆ ಸಿಹಿನೀರಿನಲ್ಲಿ ಜೀವಿಸುವ ಪ್ರಾಣಿಗಳಾವುವೂ ಇದರಲ್ಲಿ ಸೇರಿಲ್ಲ. ಜಠರಾವಕಾಶ ದೇಹದ ಗೋಡೆಗಳಿಂದ ನಾಲ್ಕು ಭಾಗವಾಗಿ ವಿಭಾಗವಾಗಿದೆ. ಈ ಗೋಡೆಗಳ ಪಕ್ಕದ ಚಾಚುಭಾಗಗಳಲ್ಲಿ ಅಲ್ಲಲ್ಲಿ ಸ್ಪರ್ಶತಂತುಗಳ ಗುಂಪುಗಳಿರುತ್ತವೆ. ಜಠರ ಕೋಶದಲ್ಲಿ ಕುಟುಕುಕಣಗಳಿವೆ. ಈ ಪ್ರಾಣಿಗಳ ಅಂಬಲಿಮೀನುಗಳ ಕೊಡೆಯ ಅಂಚಿನಲ್ಲಿ  ಎಂಟು ಅಥವಾ ಹೆಚ್ಚು ರೋಪೇಲಿಯ ಎಂಬ ಸಂವೇದನಾಂಗಗಳಿವೆ (ಜ್ಞಾನೇಂದ್ರಿಯ). ಬಾಯಿಯನ್ನು ಹೊತ್ತಿರುವಂತೆ ವೀಲಂ ಕೊಳವೆಯಿರುವುದಿಲ್ಲ. ಜಠರದ ಮಧ್ಯದಿಂದ ತ್ರಿಜ್ಯನಾಳಗಳು ಕೊಡೆಯಾಕೃತಿಯ ದೇಹದ ಅಂಚಿಗೆ ಸಾಗಿ ಅಂಚಿನ ಸುತ್ತ ಹಾದಿರುವ ಉಂಗುರದ ನಾಳಕ್ಕೆ ಸೇರುತ್ತವೆ. ತ್ರಿಜ್ಯನಾಳಗಳು ಬೇಕಾದ ಹಾಗೆ ಕವಲೊಡೆದಿದ್ದು ಒಂದಕ್ಕೊಂದಕ್ಕೆ ಸಂಬಂಧಿಸಿಕೊಂಡಿರುತ್ತವೆ. ಈ ವರ್ಗದ ಎಲ್ಲ ಪ್ರಾಣಿಗಳೂ ನೀರಿನಲ್ಲಿ ಈಜಿಕೊಂಡು ಹೋಗಬಲ್ಲವು. ಸ್ಟಾರೊಮೆಡೂಸವೆಂಬ ಒಂದು ಪ್ರಾಣಿ ಮಾತ್ರ ಪಾಲಿಪ್‍ಗಳಂತೆ ಪದಾರ್ಥಗಳಿಗೆ ಅಂಟಿಕೊಂಡು ಸ್ಥಾವರ ಜೀವನವನ್ನು ನಡೆಸುತ್ತದೆ. ಜೀವನಚರಿತ್ರೆಯಲ್ಲಿ ಪಾಲಿಪ್ ಕಿಶೋರಾವಸ್ಥೆಯಾಗಿದ್ದು (ಸ್ಕೈಫೊಸ್ಟೋಮ) ಅದರಿಂದ ಪ್ರೌಢಜೀವಿಗಳು ಮೊಗ್ಗೊಡೆದು ಬರುತ್ತವೆ.

3 ಆಂಥೊeóÉೂೀವ: ಕಡಲಹೂ, ನೈಜಹವಳದ (ರಿಯಲ್ ಕಾರಲ್) ಹುಳು, ಕಡಲಬೀಸಣಿಗೆ, ಕಡಲಗರಿಗಳು (ಸೀ ಫೆದರ್ಸ್), ಕಡಲ ಸಸ್ಯಗಳು (ಸೀ ಪ್ಯಾನ್ಸಿ) ಮುಂತಾದ ಜೀವಿಗಳು ಈ ವರ್ಗದಲ್ಲಿ ಸೇರಿವೆ. ಇವೆಲ್ಲ ವಸ್ತುಗಳಿಗೆ ಅಂಟಿಕೊಂಡು ಸಾಗರದ ತಳದಲ್ಲಿ ಸ್ಥಾವರ ಜೀವನವನ್ನು ನಡೆಸುವ ಪಾಲಿಪ್‍ರೂಪಿಗಳು. ಜಠರದ ಒಳಗೋಡೆಯಲ್ಲಿ ಕುಟುಕುಕಣಗಳಿರುತ್ತವೆ. ಜಠರಾವಕಾಶ ತ್ರಿಜ್ಯಮುಖವಾಗಿ 6, 8 ಅಥವಾ ಹೆಚ್ಚು ವಿಭಾಗಗಳಾಗಿರುತ್ತದೆ. ತಾವು ಕಚ್ಚಿಕೊಂಡಿರುವ ಪದಾರ್ಥದ ಮೇಲೆ ಒಂದೆಡೆಯಿಂದ ಇನ್ನೊಂದೆಡೆಗೆ ಚಲಿಸಲು ಅವುಗಳ ತಳದಲ್ಲಿರುವ ಕಾಲುಬಿಲ್ಲೆ (ಪೀಡಲ್ ಡಿಸ್ಕ್) ಸಹಕಾರಿಯಾಗಿದೆ. ಕೆಲವು ಪ್ರಭೇದದ ಕಡಲಹೂಗಳು ನೀರಿನಲ್ಲಿ ತೇಲು ಜೀವನ (ಪೆಲ್ಯಾಜಿಕ್) ನಡೆಸುತ್ತವೆ. ಮತ್ತೆ ಕೆಲವು ಪ್ರಭೇದಗಳು ನೀರಿನಲ್ಲಿ ಸುತ್ತಮುತ್ತ ತಿರುಗುತ್ತ ಅನಿರ್ದೇಶಿತ ರೀತಿಯಲ್ಲಿ ಮಾತ್ರ ಚಲಿಸಬಲ್ಲವು. ಡಿಂಭಾವಸ್ಥೆಯಲ್ಲಿ ಈ ವರ್ಗದ ಪ್ರಾಣಿಗಳೆಲ್ಲ ನೀರಿನಲ್ಲಿ ಈಜುತ್ತವೆ. ಲಿಂಗರೀತಿಯಲ್ಲಿ ಉತ್ಪನ್ನವಾಗುವ ಪಾಲಿಪ್‍ಗಳು ಮೊಗ್ಗೊಡೆದು ಕವಲುಗಳನ್ನು ಮೂಡಿಸಿಕೊಂಡು ಆ ಮೂಲಕ ಕೂಡುಜೀವನವನ್ನು ಆರಂಭಿಸುತ್ತವೆ. ಕೆಲವು ಪಾಲಿಪ್ ಸಮುದಾಯಗಳು ಬಹುರೂಪತೆಯನ್ನು ಪ್ರದರ್ಶಿಸುತ್ತವೆ. ಹವಳದ ಹುಳುಗಳು ಎಲುಬುಗೂಡನ್ನು ಸುಣ್ಣದಿಂದಲೂ ಕಡಲಬೀಸಣಿಗೆಗಳು ಕಠಿಣವಾದರೂ ಬಳುಕುವಂಥ ಸಸಾರಜನಕ ವಸ್ತುಗಳಿಂದಲೂ ರಚಿಸಿಕೊಳ್ಳುತ್ತವೆ.

(ಎನ್.ಎಸ್.ವಿ.)

(ಪರಿಷ್ಕರಣೆ: ಎನ್.ಎಸ್.ಲೀಲಾ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ